ರಾಷ್ಟ್ರೀಯ ಸಹಕಾರ ದತ್ತಾಂಶದ ಪ್ರಕಾರ ಕರ್ನಾಟಕದಲ್ಲಿ 46,798 ಸಹಕಾರ ಸಂಘಗಳಿದ್ದು, ಅವುಗಳಲ್ಲಿ 2.38 ಕೋಟಿ ಸದಸ್ಯರಿದ್ದಾರೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ಎನ್ಸಿಡಿಸಿ) ಇದುವರೆಗೆ ಕರ್ನಾಟಕಕ್ಕೆ ₹4,164.95 ಕೋಟಿ ಆರ್ಥಿಕ ನೆರವು ಒದಗಿಸಿದೆ. ಕೃಷಿ ಸಾಲ, ಹೈನುಗಾರಿಕೆ, ಮೀನುಗಾರಿಕೆ, ವಸತಿ ಸೇರಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಜ್ಯದ ಸಹಕಾರ ಜಾಲ ವಿಸ್ತರಿಸಿದೆ.
ಏಷ್ಯಾದ ಮೊದಲ ಸಹಕಾರ ಸಂಘ ಹುಟ್ಟಿದ ನಾಡು ಎಂಬ ಹೆಗ್ಗಳಿಕೆಯ ಕರ್ನಾಟಕದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಮತ್ತು ಬಹುಉದ್ದೇಶೀಕರಣ ಕಾರ್ಯವೂ ನಡೆಯುತ್ತಿದೆ. ಇದರಿಂದ ಹಳ್ಳಿಗಳಲ್ಲೇ ಹೆಚ್ಚಿನ ಸೇವೆಗಳು ಲಭ್ಯವಾಗಲಿವೆ.




