ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಸಾಮಾನ್ಯ 816 ಮಿ.ಮೀ ಬದಲಿಗೆ ಕೇವಲ 530 ಮಿ.ಮೀ ಮಳೆಯಾಗಿದ್ದು, ಶೇ 35ರಷ್ಟು ಕೊರತೆ ದಾಖಲಾಗಿದೆ. ಕಳೆದ 70 ವರ್ಷಗಳಲ್ಲೇ ಇದು ಎರಡನೇ ಅತಿ ಕಡಿಮೆ ಮಳೆ.
ಬರದಿಂದ ಆದ ಒಟ್ಟು ಆರ್ಥಿಕ ನಷ್ಟ ₹60 ಸಾವಿರ ಕೋಟಿಯಿಂದ ₹70 ಸಾವಿರ ಕೋಟಿಯಷ್ಟಿರಬಹುದು ಎಂದು ಅಂದಾಜಿಸಲಾಗಿದೆ. ತೊಗರಿ, ರಾಗಿ, ಈರುಳ್ಳಿ, ಮೆಕ್ಕೆಜೋಳ ಸೇರಿ ಪ್ರಮುಖ ಬೆಳೆಗಳು ಒಣಗಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಕೂಲಿಕಾರರು ಕೆಲಸ ಅರಸಿ ನಗರಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆಗೆ ಆದ್ಯತೆ ನೀಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.




